ಬಂಟ್ವಾಳ

ಬ್ಯಾನರ್, ಮೆರವಣಿಗೆಗೆ ಅವಕಾಶ ಇಲ್ಲ

  • ಟಿಪ್ಪು ಜಯಂತಿ ಆಚರಣೆ ಸೌಹಾರ್ದ  ಸಭೆ

ಬಂಟ್ವಾಳ : ಜಿಲ್ಲಾಡಳಿತದ ವತಿಯಿಂದ ಜಿಲ್ಲಾ ಮಟ್ಟದಲ್ಲಿ ಟಿಪ್ಪು ಜಯಂತಿ ಆಚರಣೆ ಮಾಡುವುದಾದರೆ ತಾಲೂಕು ಮಟ್ಟದಲ್ಲಿ ದಿಢೀರ್ ಸಭೆ ನಡೆಸುವ ಔಚಿತ್ಯವೇನು? ಅಲ್ಲದೆ ಇಲ್ಲಿನ ಅಮಾಯಕ ಯುವಕರ ಸಹಿತ ರೌಡಿಶೀಟರ್‌ಗಳ ಮೇಲೆ 108 ಪ್ರಕರಣ ದಾಖಲಿಸಿ ಕಿರುಕುಳ ನೀಡುವುದು ಯಾಕೆ? ಈ ಪ್ರಶ್ನೆಗಳು ಮಂಗಳವಾರ ಬಂಟ್ವಾಳ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಹಶೀಲ್ದರ್ ಪುರಂದರ ಹೆಗ್ಡೆ ಅಧ್ಯಕ್ಷತೆಯಲ್ಲಿ ನಡೆದ  ಸೌಹಾರ್ದ ಸಭೆಯಲ್ಲಿ ಕೇಳಿ ಬಂತು.

 

ಜಾಹೀರಾತು

ಈ ಪ್ರಶ್ನೆಗಳಿಗೆ ಉತ್ತರಿಸಲು ತಹಶೀಲ್ದಾರ್ ಪುರಂದರ ಹಗ್ಡೆ ತಡವರಿಸಿದರು. ತಕ್ಷಣ ಬಂಟ್ವಾಳ ಉಪವಿಭಾಗದ ಡಿವೈಎಸ್ಪಿ ರವೀಶ್ ಸಿಆರ್ ಉತ್ತರಿಸಿ ಸರಕಾರದ ಸೂಚನೆಯಂತೆ ಜಿಲ್ಲಾಡಳಿತದ ನಿರ್ದೇಶನ್ವಯ ಈ ಸಭೆ ಕರೆಯಲಾಗಿದೆ. ಹಾಗೆಯೇ ಕಳೆದ ವರ್ಷ ಟಿಪ್ಪು ಆಚರಣೆಯ ಸಂದರ್ಭ ಬಂಟ್ವಾಳ ಸೇರಿದಂತೆ ಜಿಲ್ಲೆಯಲ್ಲಿ ನಡೆದ ವಿವಿಧ ಅಹಿತಕರ ಘಟನೆಯ ಹಿನ್ನಲೆಯಲ್ಲಿ ಮುಂಜಾಗೃತ ಕ್ರಮವಾಗಿ ಈ ಕ್ರಮಗಳನನು ಕೈಗೊಳ್ಳಲಾಗಿದೆ. ಇದು ಕೇವಲ ಟಿಪ್ಪು ಜಯಂತಿಯ ಆಚರಣೆಯ ಸಂದರ್ಭ  ಸದವರ್ತನೆಗಾಗಿ ಈ ಪ್ರಕರಣವನ್ನು ದಾಖಲಿಸಲಾಗಿದೆಯೇ ಹೊರತು ಅವರ ವಿರುದ್ದ ಯಾವುದೇ ಕ್ರಮಿನಲ್ ಮೊಕದ್ದಮೆ ದಾಖಲಾಗುವುದಿಲ್ಲ ಎಂದು ಅವರು ಸ್ಪಷ್ಟ ಪಡಿಸಿದರಲ್ಲೇ ಯಾರ ಮೇಲೂ ದುರುದ್ದೇಶವನ್ನಿಟುಕೊಂಡು ಈ ಕಿರುಕುಳ ನೀಡುತ್ತಿಲ್ಲ ಎಂದು ಸಮಜಾಯಿಷಿ ನೀಡಿದರು.

ಕಳೆದ ವರ್ಷದ ಅಹಿತಕರ ಘಟನೆಯಿಂದಾಗಿ ಪೊಲೀಸರು ಮನೆ ಬಿಟ್ಟು ಒಂದು ತಿಂಗಳ ಕಾಲ ರಸ್ತೆ ಬದಿಯಲ್ಲಿ ದಿನ ಕಳೆದಿದ್ದಾರೆ ಅಂತಹ ಘಟನೆ ಮರಕಳಿಸ ಬಾರದು ಜನರು ಪೊಲೀಸರ ಬಗ್ಗೆಯೂ ಕರುಣೆಯನ್ನು ತೋರಿಸಿ ಎಂದು ರವೀಶ್ ಭಿನ್ನಸಿಕೊಂಡರು. ಹಿಂದಿನ ಇತಿಹಾಸವನ್ನು ಮರೆತರೆ ಹೊಸ ಸಮಾಜ ಸೃಷ್ಟಿಸಲು ಸಾಧ್ಯವಿಲ್ಲ ಹಾಗಾಗಿ ಜಿಲ್ಲಾಡಳಿತ ಆಯೋಜಿಸಿರುವ ಟಿಪ್ಪು ಜಯಂತಿಯಲ್ಲಿ ಪಾಲ್ಗೊಂಡು ಶಾಂತಿ ಸೌಹಾರ್ದತೆಯನ್ನು ಕಾಪಾಡುವಂತೆ ಮನವಿ ಮಾಡಿದರು.

ಜಿಲ್ಲಾಡಳಿತವೇ ಟಿಪ್ಪು ಜಯಂತಿಯನ್ನು ಆಚರಿಸುವುದರಿಂದ ತಾಲೂಕು ಮಟ್ಟದಲ್ಲಾಗಲೀ, ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಾಗಲಿ ಟಿಪ್ಪು ಜಯಂತಿ ಆಚರಣೆಗೆ ಅವಕಾಶ ಇಲ್ಲ. ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಸರಕಾರದ ಸುತ್ತೋಲೆಯಂತೆ ಈ ಕ್ರಮ ಕೈಗೊಳ್ಳಲಾಗಿದೆ. ಗ್ರಾಮೀಣಮಟ್ಟದಲ್ಲಿ ಯಾವುದೇ ಸಂಘ ಸಂಸ್ಥೆ ಹಾಗೂ ಮಸೀದಿಗಳಲ್ಲಿ ಆಚರಣೆ ಮಾಡುವುದಿದಲ್ಲಿ ಸ್ಥಳೀಯ ಪಂಚಾಯಿತಿನಿಂದ ನಿರಾಕ್ಷೇಪಣ ಪತ್ರ ಪಡೆದು ಸ್ಥಳೀಯ ಪೊಲೀಸರಿಂದ ಅನುಮತಿ ಪಡೆಯಬೇಕು ಎಂದು ತಹಶೀಲ್ದಾರ್ ಪುರಂದರ ಹೆಗ್ಡೆ ಸಭೆಗೆ ಮಾಹಿತಿ ನೀಡಿದರು.

ಕಾಟಚಾರದ ಆಚರಣೆ ಬೇಕಾ?

ವರ್ಷಂಪ್ರತಿ ಮಸೀದಿಗಳಲ್ಲಿ ಟಿಪ್ಪು ಜಯಂತಿಯನ್ನು ಅತ್ಯಂತ ಸರಳವಾಗಿ ಯಾವುದೇ ಗೊಂದಲವಿಲ್ಲದೆ ಆಚರಿಸುತ್ತಿದ್ದೇವೆ,  ಈ ಬಾರಿ ಜಿಲ್ಲಾಡಳಿತ ಕಾಟಾಚಾರಕ್ಕೆ ಎಂಬಂತೆ ಕಾರ್ಯಕ್ರಮ ಆಯೋಜಿಸುತ್ತಿದ್ದು ಗ್ರಾಮೀಣ ಭಾಗಗಳಿಂದ ಮಂಗಳೂರಿಗೆ ತೆರಳಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಆದ್ದರಿಂದ ಮಸೀದಿಗಳಲ್ಲಿ ಆಚರಣೆಗೆ ಅವಕಾಶ ಕಲ್ಪಸಬೇಕೆಂದು ತಾ.ಪಂ.ಸದಸ್ಯರೊಬ್ಬರು ಆಗ್ರಹಿಸಿದರು.

ಆದರೆ ತಹಶೀಲ್ದಾರ್ ಇದಕ್ಕೆ ಸ್ಪಷ್ಟವಾಗಿ ನಿರಾಕರಿಸಿದರು. ಈ ಸಂದರ್ಭ ಜೆಡಿಎಸ್ ಮುಖಂಡ ಹಾರೂನ್ ರಶೀದ್ ಅವರು ಮಾತನಾಡಿ ಟಿಪ್ಪು ಜಯಂತಿಯನ್ನು ಆಚರಿಸಲು ನಾವು ಸರಕಾರಕ್ಕೆ ಅರ್ಜಿ ಹಾಕಿಲ್ಲ.210  ವರ್ಷಗಳ ಹಿಂದೆ ಗೋರಿಯೊಳಗೆ ಮಲಗಿದ ಟಿಪ್ಪುವನ್ನು ಸರಕಾರ ಈಗ ಎಬ್ಬಿಸಿ ಅಲ್ಪಸಂಖ್ಯಾತರನ್ನು ಗುರಿಯಾಗಿಸಿರುವುದು ಯಾಕೆ? ಇಸ್ಲಾಂ ಧರ್ಮದಲ್ಲಿ ವ್ಯಕ್ತಿ ಪೂಜೆಗೆ ಅವಕಾಶ ಇಲ್ಲ. ಮಸೀದಿಯಲ್ಲಿ ಸಾಂಪ್ರಾದಯಿಯಕವಾಗಿ ನಡೆಸುವ ಆಚರಣೆಗೂ ಜಿಲ್ಲಾಡಳಿತ ಹಾಗೂ ತಾಲೂಕಾಡಳಿತ ವಿರೋಧ ವ್ಯಕ್ತಪಡಿಸುತ್ತಿರುಗುದಾದರೂ ಯಾಕೆ ? ಎಂದು ಪ್ರಶ್ನಿಸಿದರು.

ಹಿಂ.ಜಾ.ವೇ. ವಿಟ್ಲ ಪ್ರಖಂಡದ ಸಂಚಾಲಕ ನರಸಿಂಹ ಅವರು ಮಾತನಾಡಿ ಟಿಪ್ಪು ಜಯಂತಿಯ ಹೆಸರಿನಲ್ಲಿ ಉದ್ರೇಕಕಾರಿ ಘೋಷಣೆವುಳ್ಳ ಬ್ಯಾನರ್, ಮೆರವಣಿಗೆ ನಡೆಸಿದರೆ ನಾವು ವಿರೋಧಿಸುತ್ತೇವೆ, ಧಾರ್ಮಿಕ ಚೌಕಟ್ಟಿನೊಳಗೆ ಮಸೀದಿಯಲ್ಲಿ ಆಚರಣೆ ನಡೆಸಿದರೆ ನಮ್ಮದು ಯಾವುದೇ ಅಭ್ಯಂತರವಿಲ್ಲ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ತೆಗೆದುಕೊಂಡಿರುವ ಎಲ್ಲಾ ಕ್ರಮಗಳಿಗೆ ಸಂಘ ಪರಿವಾಋದ ಸಂಘಟನೆಯಿಂದ ಸಂಪೂರ್ಣ ಸಹಕಾರ ನೀಡಿಲಿದ್ದೇವೆ ಎಂದು ತಿಳಿಸಿದರು.

ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಅಲಿ, ಪೊಲೀಸ್ ವೃತ್ತ ನಿರೀಕ್ಷಕ ಬಿ.ಕೆ.ಮಂಜಯ್ಯ ಉಪಸ್ಥಿತರಿದ್ದರು.

ಮಾಜಿ ಜಿ.ಪಂ.ಸದಸ್ಯ ಎಸ್.ಅಬ್ಬಾಸ್, ಆದಂಕುಂಙ, ಧನಂಜಯ ಶೆಟ್ಟಿ, ಗಣಪತಿ ಭಟ್, ಅಝೀಜ್ ಬೊಳ್ಳಾಯಿ, ರವಿರಾಜ್ ಬಿ.ಸಿ.ರೋಡು, ಮೊನೀಶ್ ಅಲಿ, ಸಲೀಂ ಕುಂಪಣ ಮಜಲು, ರಝಾಕ್ ಇರಾ, ಮಹಮ್ಮದ್ ನಂದಾವರ ಸೇರಿದಂತೆ ತಾ.ಪಂ.ಸದಸ್ಯರು, ಗ್ರಾ.ಪಂ.ಅಧ್ಯಕ್ಷರು ಹಾಗೂ ಇಲಾಖಾಧಿಕಾರಿಗಳು ಹಾಜರಿದ್ದರು

 

 

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.