ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿ ಕಾರ್ಯಕ್ಕೆ ಕೇಂದ್ರ ಸರ್ಕಾರದಿಂದ ವಿವಿಧ ಯೋಜನೆಯಡಿ ಒಟ್ಟು 10700 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಬುಧವಾರ ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ, ಕಾರ್ಯಕರ್ತರೊಂದಿಗೆ ಸಂವಾದ ನಡೆಸಿ ಅಹವಾಲು ಸ್ವೀಕರಿಸಿದ ಬಳಿಕ ಬಿ.ಸಿ.ರೋಡಿನಲ್ಲಿರುವ ಪಕ್ಷ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ದ.ಕ. ಜಿಲ್ಲೆಗೆ ಸಿಆರ್ ಎಫ್ ಅನುದಾನದಡಿ 122 ಕೋಟಿ ರೂ ಅನುದಾನ ಬಿಡುಗಡೆಯಾಗಿದ್ದು, ಈ ಪೈಕಿ ಪ್ರಸ್ತುತ ಚರ್ಚೆಯಲ್ಲಿರುವಂತೆ ಬಂಟ್ವಾಳ ವಿಧಾನಸಭಾ ಕ್ಷೇತ್ರಕ್ಕೆ 27 ಕೋಟಿ ರೂ ಬಿಡುಗಡೆಯಾಗಿದೆ. ಕೇಂದ್ರದಿಂದ ರಾಜ್ಯ ಸರ್ಕಾರಕ್ಕೆ ಬರುವ ಈ ಅನುದಾನದಲ್ಲಿ ಶಾಸಕರ ಪ್ರಸ್ತಾವನೆಗೆ ಸಂಸದರ ಒಪ್ಪಿಗೆಯೂ ಅಗತ್ಯವಿದೆ. ಕೇಂದ್ರ ನಿಧಿಯಾಗಿರುವ ಕಾರಣ ಅನುದಾನ ಬಿಡುಗಡೆಯಾದ ಆದೇಶ ಪತ್ರ ನನಗೆ ಬಂದಿದೆ ಎಂದು ಸುದ್ದಿಗಾರರ ಮುಂದೆ ಪತ್ರವನ್ನು ಪ್ರದರ್ಶಿಸಿದರು.
ಅಭಿವೃದ್ಧಿಯಲ್ಲಿ ನಾವು ರಾಜಕೀಯ ಮಾಡುವುದಿಲ್ಲ. ತೆಂಗಿನಕಾಯಿಯನ್ನು ಯಾರು ಬೇಕಾದರೂ ಒಡೆಯಬಹುದು ಎಂದು ಲೇವಡಿ ಮಾಡಿದ ಸಂಸದರು ಮತದಾರರಿಗೆ ತಪ್ಪು ಸಂದೇಶ ರವಾನೆಯಾಗದಂತೆ ಪಕ್ಷದ ಕಾರ್ಯಕರ್ತರ ಮೂಲಕ ಮಾಹಿತಿ ನೀಡಲಾಗುತ್ತಿದೆ ಎಂದರು.
ಪುರಸಭೆ ವ್ಯಾಪ್ತಿಯಲ್ಲಿ ಪ್ರಗತಿಯಲ್ಲಿರುವ ಎರಡನೇ ಹಂತದ ಕುಡಿಯುವ ನೀರಿನ ಕಾಮಗಾರಿಗೂ ಕೇಂದ್ರ ಶೇ.80ರಷ್ಟು ಅನುದಾನ ನೀಡಿದೆ. ರಾಜ್ಯ ಸರ್ಕಾರ ಶೇ.10 ಹಾಗೂ ಪುರಸಭೆ ಶೇ.10 ಅನುದಾನ ಭರಿಸಿದೆ. ಕೊರತೆ ಅನುದಾನವನ್ನು ರಾಜ್ಯ ಸರ್ಕಾರ ಭರಿಸುವ ಒಪ್ಪಿಗೆ ನೀಡಿದೆ ಎಂದರು.
ಆಸ್ಕರ್ ಫೆರ್ನಾಂಡೀಸ್ ಭೂಸಾರಿಗೆ ಸಚಿವರಾಗಿದ್ದಾಗ ಮುಂಗಡವಾಗಿ ಕೆಲ ಕಾಮಗಾರಿಗಳನ್ನು ಮಂಜೂರು ಮಾಡಿದ್ದು, ಅವು ಅನುಷ್ಠಾನಕ್ಕೆ ಬಂದಿವೆ. ಆದರೆ ಇದಕ್ಕೆ ಸಂಬಂಧಿಸಿದಂತೆ ಅನುದಾನವನ್ನು ಎನ್ ಡಿಎ ಸರ್ಕಾರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಮಂಜೂರಾತಿ ನೀಡಿದ್ದಾರೆ ಎಂದು ಸಂಸದ ತಿಳಿಸಿದರು.