ಬಂಟ್ವಾಳ

ಜೋಡುಮಾರ್ಗ ಉದ್ಯಾನವನಕ್ಕೆ ಶುಲ್ಕ

ಬಂಟ್ವಾಳ : ಇತ್ತೀಚೆಗಷ್ಟೇ ಲೋಕಾರ್ಪಣೆಗೊಂಡ ಜೋಡುಮಾರ್ಗ ಉದ್ಯಾನವನಕ್ಕೆ ಬಿಜೆಪಿ ಸದಸ್ಯರ ಆಕ್ಷೇಪದ ನಡುವೆಯೂ ಶುಲ್ಕ ವಿಧಿಸಿ ಬಂಟ್ವಾಳ ಪುರಸಭೆಯ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.
1ರಿಂದ 3 ವರ್ಷದವರೆಗಿನ ಮಕ್ಕಳಿಗೆ ಉಚಿತ ಪ್ರವೇಶ. 3ರಿಂದ 7 ವರ್ಷದವರೆಗಿನ ಮಕ್ಕಳಿಗೆ 5 ರೂಪಾಯಿ ಹಾಗೂ 7ರಿಂದ ಮೇಲ್ಪಟ್ಟವರಿಗೆ 10 ರೂಪಾಯಿಯಂತೆ ಪ್ರವೇಶ ಶುಲ್ಕ ನಿಗದಿ ಪಡಿಸಿ ಸಭೆ ನಿರ್ಣಯಕೈಗೊಂಡಿದೆ. ಇದು ಪುರಸಭೆಗೆ ನಾಚಿಕೆಗೇಡಿನ ವಿಚಾರವಾಗಿದ್ದು ಉದ್ಯಾನವನ ಮೂಲಭೂತ ಸೌಲಭ್ಯಗಳಲ್ಲಿ ಒಂದಾಗಿರುವುದರಿಂದ ಪ್ರವೇಶ ಶುಲ್ಕ ವಿಧಿಸುವುದು ಸಾಧುವಲ್ಲ ಎಂದು ಸದಸ್ಯ ಗೋವಿಂದ ಪ್ರಭುರವರು ಆಕ್ರೋಶ ವ್ಯಕ್ತಪಡಿಸಿದರೆ ಸದಸ್ಯ ದೇವದಾಸ ಶೆಟ್ಟಿಯವರು ಉದ್ಯಾನದೊಳಗೆ ಎಲ್‌ಇಡಿಗಳನ್ನು ಅಳವಡಿಸಿ ಪರಸಭೆಯಿಂದ ಸಿಗುವ ಸವತ್ತುಗಳ ಹಾಗೂ ಕೆಲವೊಂದು ಮಾಹಿತಿಯನ್ನು ಪ್ರಸಾರ ಮಾಡುವುದರ ಜೊತೆಗೆ ಜಾಹೀರಾತು ಸಂಸ್ಥೆಗಳಿಂದಲೂ ಜಾಹೀರಾತು ಪ್ರಸಾರ ಮಾಡಿದಲ್ಲಿ ಉದ್ಯಾನವನದ ನಿರ್ವಹಣೆಗೆ ಮತ್ತು ಪುರಸಭೆಗೂ ಆದಾಯ ಬರುವ ಸಾದ್ಯತೆ ಇದೆ ಎಂದು ಸಲಹೆ ನೀಡಿದರು. ಸದಸ್ಯ ಪ್ರವೀಣ್ ಬಿ.ರವರು ಇದಕ್ಕೆ ದ್ವನಿಗೂಡಿಸಿದರು. ಈ ಬಗ್ಗೆಯೂ ಚಿಂತನೆ ನಡೆಸಲಾಗುವುದೆಂದು ಮುಖ್ಯಾಧಿಕಾರಿ ಸುಧಾಕರರವರು ತಿಳಿಸಿದರು.
ಬಿಕ್ಷುಕರು ಸಹಿತ ಕೆಲ ಸಾರ್ವಜನಿಕರು ಉದ್ಯಾನವನ್ನು ದುರುಪಯೋಗಪಡಿಸುವ ಸಾಧ್ಯತೆ ಇದೆ. ಹಾಗಾಗಿ ಶುಲ್ಕ ವಿಧಿಸುವುದು ಅನಿವಾರ್ಯವಾಗಿದೆ ಎಂದು ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು ಅಭಿಪ್ರಾಯ ಪಟ್ಟರೆ ಇದಕ್ಕೆ ಸದಸ್ಯರಾದ ಜಗದೀಶ್ ಕುಂದರ್, ಚಂಚಲಾಕ್ಷಿ, ಜೆಸಿಂತಾ ದ್ವನಿಗೂಡಿಸಿದರು. ಕೊನೆಗೆ ಸುದೀರ್ಘ ಚರ್ಚೆಯ ಬಳಿಕ ಈ ಮೇಲಿನಂತೆ ಶುಲ್ಕ ವಿಧಿಸಲು ನಿರ್ಧರಿಸಲಾಯಿತು. ಇದರ ನಿರ್ವಹಣೆಯ ಬಗ್ಗೆಯೂ ಸುದೀರ್ಘ ಚರ್ಚೆ ನಡೆಯಿತು. ಸಚಿವ ರಮಾನಾಥ ರೈಯವರ ಸೂಚನೆಯ ಮೆರೆಗೆ ಅರಣ್ಯ ಇಲಾಖೆ ಇದರ ನಿರ್ವಹಣೆಯನ್ನು ವಹಿಸಿಕೊಳ್ಳಲಿದೆ ಎಂದು ಅಧ್ಯಕ್ಷ ರಾಮಕೃಷ್ಣ ಆಳ್ವ ಸಭೆಗೆ ಮಾಹಿತಿ ನೀಡಿದರು. ಈಗಾಗಲೇ ಪರಿಸರ ಇಲಾಖೆ ಈ ಉದ್ಯಾನವನ್ನು ಪುರಸಭೆಗೆ ಹಸ್ತಾಂತರಿಸಿದೆ ಎಂದು ಬಿಜೆಪಿ ಸದಸ್ಯ ಪ್ರಶ್ನೆಗೆ ಮುಖ್ಯಾಧಿಕಾರಿಯವರು ಉತ್ತರಿಸಿದರು. ಉದ್ಯಾನವನದ ನಿರ್ವಹಣೆಯ ಕುರಿತಂತೆ ಕಳೆದ ಸಾಮಾನ್ಯ ಸಭೆಯಲ್ಲಾದ ನಿರ್ಣಯವನ್ನು ತಿರುಚಿ ನಿರ್ಣಯ ದಾಖಲಿಸಿರುವ ಬಗ್ಗೆ ಬಿಜೆಪಿ ಸದಸ್ಯರು ಆಕ್ರೊಶ ವ್ಯಕ್ತಪಡಿಸಿದರು.
ಕೆಯುಡಬ್ಲಯೂಸಿ ಅಧಿಕಾರಿಣಿಗೆ ತರಾಟೆ :
ಎರಡನೇ ಹಂತದ ಸಮಗ್ರ ಕುಡಿಯುವ ನೀರಿನ ಯೋಜನೆಯ ಕಾಮಗಾರಿಯಿಂದಾಗಿ ಪುರಸಭಾ ವ್ಯಾಪ್ತಿಯ ವಿವಿಧೆಡೆ ರಸ್ತೆಗಳು ತೀವ್ರ ಹದಗೆಟ್ಟಿರುವ ಬಗ್ಗೆ ಗೋವಿಂದ ಪ್ರಭು, ಬಿ. ಪ್ರವೀಣ್‌ರವರು ತೀವ್ರ ಅಸಮಾಧಾನ ವ್ಯಕ್ತ ಪಡಿಸಿದ ಕೆಯುಡಬ್ಲೂಸಿ ಅಧಿಕಾರಿ ಶೋಭಲತಾರವರನ್ನು ತರಾಟೆಗೆ ತೆಗೆದುಕೊಂಡರು. ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿ ಈಗಾಗಲೇ ೪ ಕೋಟಿ ರೂ. ರಸ್ತೆ ದುರಸ್ತಿಗೆ ಮೀಸಲಿಟ್ಟಿದೆ ಎಂದು ಮಾಹಿತಿ ನೀಡಿದಾಗ ಕೆರಳಿದ ಅಧ್ಯಕ್ಷ ರಾಮಕೃಷ್ಣ ಆಳ್ವ ಸಹಿತ ಸದಸ್ಯರೆಲ್ಲರೂ ಹೆಚ್ಚುವರಿ ಅನುದಾನವನ್ನು ನೀಡಬೇಕೆಂದು ಒತ್ತಾಯಿಸಿದರು. ಈ ಹಂತದಲ್ಲಿ ಸದಸ್ಯ ಗೋವಿಂದ ಪ್ರಭುರವರು ಮದ್ಯಪ್ರವೇಶಿಸಿ ಈ ಮೊದಲು ರಸ್ತೆ ಸಂಬಂಧಿಸಿ ಚರ್ಚೆ ನಡೆಯುವ ವೇಳೆ ಇಂಜಿನಿಯರ್ ಡೊಮಿನಿಕ್ ಡಿಮೆಲ್ಲೋರವರು ರಸ್ತೆ ದುರಸ್ತಿಗೆ 16.5 ಕೋಟಿ ರೂ. ಹೆಚ್ಚುವರಿ ಅನುದಾನ ನೀಡಿರುವುದಾಗಿ ಮಾಹಿತಿ ನೀಡಿದ್ದಾರೆ. ಆದರೆ ಕೇವಲ 4 ಕೋಟಿ ಯಷ್ಟೇ ಮಾತ್ರ ಮೀಸಲಿಟ್ಟಿದೆ ಎಂದು ತಾವು ಹೇಳುವುದಾದರೆ ಇದರಲ್ಲಿ ಯಾವುದು ಸರಿ ಯಾವುದು ತಪ್ಪು ಎಂದು ಸ್ಪಷ್ಟಪಡಿಸುವಂತೆ ಮುಖ್ಯಾಧಿಕಾರಿಯನ್ನು ಸಹಿತ ಕೆಯುಡಬ್ಲಯೂಸಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಈ ವಿಚಾರದಲ್ಲಿ ಸುದೀರ್ಘ ವಿಚಾರ ನಡೆದ ಬಳಿಕ ಜಮೀನು ಖರೀದಿ ಸೇರಿದಂತೆ ರಸ್ತೆ ದುರಸ್ತಿಗೆ ಹೆಚ್ಚುವರಿ ಅನುದಾನ ಕೋರಿ ಹೊರ ಪ್ರಸ್ಥಾವನೆಯನ್ನು ಸಲ್ಲಿಸಲು ನಿರ್ಧರಿಸಿರುವ ಮೂಲಕ ಚರ್ಚೆಗೆ ತೆರೆ ಎಳೆಯಲಾಯಿತು.
ಸಭೆಯಲ್ಲಿ ಮಂಡಿಸಲಾಗದ ಪಾಲನಾ ವರದಿಯ ಮಂಜೂರಾತಿಗೆ ಉಲ್ಲೇಖಿಸಲಾದ 6 ಅಂಶಗಳಿಗೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಪ್ರಾಕೃತಿಕ ವಿಕೋಪದಲ್ಲಿ ಹಾನಿಗೊಳಗಾದ ದಾರಿದೀಪ, ವಿದ್ಯುತ್ ಕಂಬ ಅಳವಡಿಸದ ಬಗ್ಗೆ ಸಭೆಯಲ್ಲಿ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.
ಬಿ.ಸಿ.ರೋಡು ಮುಖ್ಯ ವೃತ್ತ ಬಳಿ ಖಾಸಗಿ ಬಸ್ಸು ನಿಲ್ದಾಣ ಮತ್ತು ವಾಣಿಜ್ಯ ಮಳಿಗೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪಿ.ಪಿ. ಮಾದರಿಯಲ್ಲಿ ಯೋಜನೆಯನ್ನು ಕೈಗೆತ್ತಿಕೊಳ್ಳಲು ನೀಲ ನಕ್ಷೆ ಮತ್ತು ಕ್ರಿಯಾಯೋಜನೆ ತಯಾರಿಗೆ 4.95 ಲಕ್ಷ ರೂ. ಪಾವತಿಸುವಂತೆ ಸಭೆಯಲ್ಲಿ ಬಿಸಿಬಿಸಿ ಚರ್ಚೆ ನಡೆಯಿತು. 2011 ರಲ್ಲೇ ಇದೇ ಸ್ಥಳದಲ್ಲಿ ಖಾಸಗಿ ಬಸ್ಸು ನಿಲ್ದಾಣ ನಿರ್ಮಿಸುವ ಬಗ್ಗೆ ನಿರ್ಣಯ ಕೈಗೊಂಡು ಅಂದಾಜು ಪಟ್ಟಿ ತಯಾರಿಸಿ ನೀಲನಕ್ಷೆ ಕೂಡಾ ಸಿದ್ಧ ಪಡಿಸಲಾಗಿತ್ತು. ಆ ಯೋಜನೆ ಈಗ ಏನಾಗಿದೆ ಎಂದು ಸದಸ್ಯ ಗೋವಿಂದ ಪ್ರಭು ಪ್ರಶ್ನಿಸಿದಾಗ ಇದಕ್ಕೆ ಯಾರು ಕೂಡಾ ಸಮರ್ಪಕ ಉತ್ತರ ನೀಡಲಿಲ್ಲ. ಇದರಿಂದ ಮತ್ತಷ್ಟು ಕೆರಳಿದ ಪ್ರಭುರವರು ಮುಖ್ಯಾಧಿಕಾರಿ ಹಾಗೂ ಇಂಜಿನಿಯರ್‌ರವರನ್ನು ತರಾಟೆಗೆ ತೆಗೆದುಕೊಂಡರು. ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ತಮ್ಮಷ್ಟಕ್ಕೆ ಎಲ್ಲವನ್ನೂ ನಿರ್ಧರಿಸುವುದಾದರೆ ತಮಗೆ ಮನಬಂದಂತೆ ಮಾಡಿಕೊಳ್ಳಿ ಎಂದು ಆಕ್ರೋಶ ವ್ಯಕ್ತಪಡಿಸಿ ಸುಮ್ಮನಾದರು.
ಸಭಾಧ್ಯಕ್ಷತೆಯನ್ನು ಅಧ್ಯಕ್ಷ ರಾಮಕೃಷ್ಣ ಆಳ್ವ ವಹಿಸಿದ್ದರು. ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು ವೇದಿಕೆಯಲ್ಲಿದ್ದರು. ತರಬೇತಿ ಐಎಎಸ್ ಅಧಿಕಾರಿಣಿ ಗಾರ್‍ಜಿ ಜೈನ್ ಉಪಸ್ಥಿತರಿದ್ದರು. ಮುಖ್ಯಾಧಿಕಾರಿ ಸುಧಾಕರ್ ಸ್ವಾಗತಿಸಿ ವಂದಿಸಿದರು. ಸದಸ್ಯರಾದ ವಸಂತಿ ಚಂದಪ್ಪ, ಇಕ್ಬಾಲ್ ಗೂಡಿನಬಳಿ, ಶರೀಫ್, ಮೊನೀಸ್ ಆಲಿ, ಪ್ರಭಾ ಆರ್. ಸಾಲ್ಯಾನ್, ಚಂಚಲಾಕ್ಷಿ, ಭಾಸ್ಕರ ಟೈಲರ್, ಸುಗುಣ ಕಿಣಿ, ಗಂಗಾಧರ, ಲೋಕೇಶ ಅಲೆತ್ತೂರು, ಯಾಸ್ಮಿನ್ ಮೊದಲಾಧವರು ವಿವಿದ ಚರ್ಚೆಯಲ್ಲಿ ಪಾಲ್ಗೊಂಡರು.
ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts