ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಜಗದೀಶ್, ಬಂಟ್ವಾಳ ಪುರಸಭೆಗೆ ಸೋಮವಾರ ಸಂಜೆ ಭೇಟಿ ನೀಡಿ, ಅಧಿಕಾರಿಗಳ ಸಭೆ ನಡೆಸಿ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿದರು.
ಈ ಸಂದರ್ಭ ಪುರಸಭಾ ವ್ಯಾಪ್ತಿಗೊಳಪಡುವ ಪ್ರದೇಶದ ವಿವಿಧ ಸಮಸ್ಯೆಗಳ ಕುರಿತು ಚರ್ಚೆ ನಡೆಸಿದ ಅವರು, ವಾರದೊಳಗೆ ಬಸ್ ಬೇ ಕುರಿತ ಸರ್ವೇ, ನದಿಗೆ ಅಕ್ರಮವಾಗಿ ತ್ಯಾಜ್ಯ ಎಸೆಯುವವರ ವಿರುದ್ಧ ಕಠಿಣ ಕ್ರಮ, ಅಕ್ರಮ ಕಟ್ಟಡಗಳು, ಅನಧಿಕೃತವಾಗಿ ಹಾಗೂ ನಿಯಮಬಾಹಿರವಾಗಿ ಕಟ್ಟಿದ ಕಟ್ಟಡಗಳ ಸರ್ವೇ ಹಾಗೂ ಅವುಗಳ ಮಾಲೀಕರಿಗೆ ನೋಟಿಸ್, ಎಲ್ಲ ಬಹುಮಹಡಿ ಕಟ್ಟಡಗಳ ಸೆಟ್ ಬ್ಯಾಕ್ ಕುರಿತ ಸರ್ವೇಗೆ ಆದೇಶಿಸಿದರು.
ಬಿ.ಸಿ.ರೋಡ್ ನ ಪಾರ್ಕಿಂಗ್ ವ್ಯವಸ್ಥೆ, ಮಣಿಹಳ್ಳ ರಸ್ತೆ ಅಗಲೀಕರಣ, ಪಾಣೆಮಂಗಳೂರು ಅಕ್ರಮ ಕಟ್ಟಡ, ಬಂಟ್ವಾಳ ಬೈಪಾಸ್ ನ್ನು ಖುದ್ದು ವೀಕ್ಷಿಸಿದ ಅವರು ಅಧಿಕಾರಿಗಳಿಗೆ ನಕ್ಷೆ ಪ್ರಕಾರ ಕಾರ್ಯಾಚರಿಸಲು ಹಾಗೂ ಯಾವುದೇ ಒತ್ತಡಗಳಿಗೆ ಮಣಿಯದೆ ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸಲು ಸಲಹೆ ನೀಡಿದರು.
ಆದರೆ ತಪ್ಪು ವರದಿ ನೀಡಿದರೆ ಶಿಸ್ತು ಕ್ರಮ ಎದುರಿಸಬೇಕಾದೀತು ಎಂದು ಎಚ್ಚರಿಸಿದರು.
ಸಹಾಯಕ ಕಮೀಷನರ್ ಗಾರ್ಗಿ, ಪುರಸಭೆ ಮುಖ್ಯಾಧಿಕಾರಿ ಕೆ.ಸುಧಾಕರ್, ಅಧ್ಯಕ್ಷ ರಾಮಕೃಷ್ಣ ಆಳ್ವ, ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು, ಹಿರಿಯ ಸದಸ್ಯ ಎ.ಗೋವಿಂದ ಪ್ರಭು, ಸದಸ್ಯರಾದ ಇಕ್ಬಾಲ್ ಗೂಡಿನಬಳಿ, ಮಹಮ್ಮದ್ ಶರೀಫ್ ಮೊದಲಾದವರು ಇದ್ದರು.