ವಿಟ್ಲ: ಬಂಟ್ವಾಳ ಕ್ಷೇತ್ರದ ಕೊಳ್ನಾಡು ಗ್ರಾಮದ ನೆಕ್ಕರೆಕಾಡು ಸೇತುವೆ ನಿರ್ಮಾಣಕ್ಕೆ 5 ಕೋಟಿ ರೂ. ಮಂಜೂರಾಗಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಬಿ.ರಮಾನಾಥ ರೈ ಹೇಳಿದರು. ನೆಕ್ಕರೆಕಾಡು ನದಿ ಸ್ಥಳ ಪರಿಶೀಲಿಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಪೆಟ್ರೋಲ್ ಮತ್ತು ಡೀಸಲ್ ಸೆಸ್ ಮೂಲಕ ಸಂಗ್ರಹವಾದ ಮೊತ್ತದಿಂದ ಪ್ರತಿಯೊಂದು ರಾಜ್ಯಕ್ಕೆ ಅನುಧಾನ ದೊರೆಯುತ್ತದೆ. ರಾಜ್ಯ ಸರ್ಕಾರದ ಪ್ರಸ್ತಾವನೆಯ ಮೇರೆಗೆ ಸಿಆರ್‌ಎಫ್ ಯೋಜನೆಯನ್ನು ಸಿದ್ದಪಡಿಸಲಾಗುತ್ತದೆ. ಯೋಜನೆಯ ಉಳಿತಾಯದ ಹಣವಿದೆ ಎಂದರು.
ಸೆಸ್ ಮೂಲಕ ಸಂಗ್ರಹವಾದ ಮೊತ್ತದಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರಕ್ಕೆ ಸುಮಾರು 26.8 ಕೋಟಿ ರೂ. ಅನುದಾನ ಮಂಜೂರಾಗಿದೆ. ನೆಕ್ಕರೆಕಾಡು ಸೇತುವೆ ಹಿಂದಿನ ದಿನಗಳಲ್ಲಿ ಜಯಿಕಾ ಮತ್ತು ಲೋಕೋಪಯೋಗಿ ಇಲಾಖೆ ಅಂದಾಜುಪಟ್ಟಿ ಸಲ್ಲಿಸಿ, ಪ್ರಸ್ತಾವನೆ ಕಳುಹಿಸಲಾಗಿತ್ತು. ಕಳೆದ ವರ್ಷ ಸೆಸ್ ಹಣ ಉಳಿದಿರುವ ಅನುದಾನದ ಮಾಹಿತಿ ಲಭ್ಯವಾಗಿ, ಈ ಭಾಗದ ಜನತೆ ಬಹುಕಾಲದ ಹಿಂದೆ ಸಲ್ಲಿಸಿದ ಬೇಡಿಕೆಯನ್ನು, ಕೊಳ್ನಾಡು ಗ್ರಾ.ಪಂ.ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಅವರೊಡನೆ 8 ತಿಂಗಳ ಹಿಂದೆ ಬೇಡಿಕೆ ದೃಢೀಕರಿಸಿ, ಅದನ್ನು ಈಡೇರಿಸುವ ಸಲುವಾಗಿ ರಾಜ್ಯ ಸರಕಾರದ ಮೂಲಕ ಸಿ.ಆರ್.ಎಫ್. ಯೋಜನೆಗೆ ಪ್ರಸ್ತಾವನೆ ಕಳುಹಿಸಲಾಗಿತ್ತು ಎಂದರು.
ಕೊಳ್ನಾಡು ಗ್ರಾಮದ ಅಗರಿಯಿಂದ ನೆಕ್ಕರೆಕಾಡು ಮತ್ತು ಕುಳಾಲಿನಿಂದ ನೆಕ್ಕರೆಕಾಡು ವರೆಗೆ ಈ ರಸ್ತೆ ಸಂಪೂರ್ಣ ಡಾಮರೀಕರಣಗೊಂಡಿದ್ದು ಈ ಸೇತುವೆ ಬಾಕಿಯಾಗಿತ್ತು. 10 ದಿನಗಳ ಹಿಂದೆ ಇದು ಮಂಜೂರಾಗಿದ್ದು, ಇದಕ್ಕೆ ಈ ಭಾಗದ ಶಾಸಕನಾಗಿ ಪ್ರಸ್ತಾವನೆ ಸಲ್ಲಿಸಿದ ದಾಖಲೆ ನಮ್ಮಲ್ಲಿದೆ. ಸೇತುವೆ ನಿರ್ಮಾಣವಾಗುವುದರಿಂದ ಕೊಳ್ನಾಡು, ಸಾಲೆತ್ತೂರು, ಕನ್ಯಾನ, ಕರೋಪಾಡಿ ಗ್ರಾಮಗಳನ್ನು ಸಂಪರ್ಕಿಸಲು ಜತೆಗೆ ಕೇರಳವನ್ನು ಹತ್ತಿರದ ರಸ್ತೆಯಾಗುತ್ತದೆ. ಇನ್ನು ಎರಡು ತಿಂಗಳಲ್ಲಿ ಈ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಲಾಗುವುದು ಎಂದು ಹೇಳಿದರು.
ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿಯಲ್ಲಿ ಮಂಕುಡೆ-ಕುಂಟುಕುಡೇಲು ರಸ್ತೆಗೆ, ಬೋಳಂತೂರು, ತಾಳಿತ್ತನೂಜಿ, ಮದಕ ರಸ್ತೆ ಅನುದಾನ ಬಿಡುಗಡೆಯಾಗಲಿದೆ. ಅಪೆಂಡಿಕ್ಸ್ ಸಿ ಅನುದಾನದಲ್ಲಿ ರಾಜ್ಯ ಹೆದ್ದಾರಿಗಳಿಗೆ 18 ಕೋಟಿ ರೂ. ಅನುದಾನ ಮಂಜೂರಾಗಿದೆ. ಕಲ್ಲಡ್ಕ-ಕಾಂಞಂಗಾಡ್ ಅಂತಾರಾಜ್ಯ ಹೆದ್ದಾರಿಯನ್ನು ಮತ್ತು ಬಂಟ್ವಾಳ ಕ್ಷೇತ್ರ ವ್ಯಾಪ್ತಿಯ ಮಂಗಳಪದವು-ಅನಂತಾಡಿ ರಸ್ತೆಯನ್ನು ಅಭಿವೃದ್ಧಿಗೊಳಿಸಲಾಗುವುದು ಎಂದು ತಿಳಿಸಿದರು.
ದ.ಕ.ಜಿ.ಪಂ.ಸದಸ್ಯ ಎಂ.ಎಸ್.ಮಹಮ್ಮದ್, ಎಇಇ ಅಬ್ದುಲ್‌ರಹಿಮಾನ್, ಎಇ ಅಶೋಕ್, ಕೊಳ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು ಮತ್ತು ಸದಸ್ಯರಾದ ಗುರುವಪ್ಪ ಮುಗೇರ, ವಿಶ್ವನಾಥ ಶೆಟ್ಟಿ ಪೆರ್ಲದಬೈಲು, ಮಹಮ್ಮದ್ ಸಾಲೆತ್ತೂರು ಕಟ್ಟೆ, ಮಹಮ್ಮದ್ ಮಂಚಿ, ಇಬ್ರಾಹಿಂ ಮಣ್ಣಗದ್ದೆ, ಲೀನಾ ಡಿ ಸೋಜಾ, ಪವಿತ್ರ ಪೂಂಜ, ಅಬ್ದುಲ್ಲ ಎ.ಬಿ., ಗಂಗಾಧರ ಚೌಟ, ಸಿ.ಎಚ್.ಅಬೂಬಕ್ಕರ್, ಹಮೀದ್ ಎನ್., ಕುಳಾಲು ರಾಮದಾಸ್ ಭಂಡಾರಿ, ಕರುಣಾಕರ ರೈ, ಅಶ್ರಫ್ ಸಾಲೆತ್ತೂರು ಮತ್ತಿತರರು ಉಪಸ್ಥಿತರಿದ್ದರು.