ಬಂಟ್ವಾಳ: ಪುರಸಭೆ ವ್ಯಾಪ್ತಿಯ ಎರಡನೆ ಹಂತದ ಸಮಗ್ರ ಕುಡಿಯುವ ನೀರಿನ ಯೋಜನೆಯ ಪೈಪ್ ಅಳವಡಿಕೆಗಾಗಿ ಬಂಟ್ವಾಳ ಬೈಪಾಸ್ ಜಂಕ್ಷನ್ ರಸ್ತೆ ಬದಿಯ ಅಧಿಕೃತ ಹಾಗೂ ಅನಧಿಕೃತ ಅಂಗಡಿಗಳನ್ನು ಪುರಸಭೆ ಗುರುವಾರ ಸಂಜೆ ತೆರವುಗೊಳಿಸಿದ್ದು ಇದರ ಸದುಪಯೋಗಪಡಿಸಿಕೊಂಡ ಬಂಟ್ವಾಳ ಟ್ರಾಫಿಕ್ ಎಸ್ಸೈ ಚಂದ್ರಶೇಖರಯ್ಯ ಅವರು ಬಸ್ ನಿಲುಗಡೆಗಾಗಿ ರಸ್ತೆಯನ್ನು ಅಗಲೀಕರಣಗೊಳಿಸುವ ಕಾರ್ಯಕ್ಕೂ ಮುಂದಾದರು.
ಬಂಟ್ವಾಳ ಬೈಪಾಸ್ ಜಂಕ್ಷನ್ನಿಂದ ಕಾಲೇಜ್ ರಸ್ತೆಯ ಬಲ ಭಾಗದಲ್ಲಿ ತರಕಾರಿ, ಫಾಸ್ಟ್ಫುಡ್, ಸೆಲೂನ್ ಮೊದಲಾದ ಅಂಗಡಿಗಳನ್ನು ಮುಖ್ಯಾಧಿಕಾರಿ ಸುಧಾಕರ್, ಎಂಜಿನಿಯರ್ ಡೊಮೆನಿಕ್ ಡಿಮೆಲ್ಲೊ ಪೊಲೀಸರ ಸಹಕಾರದೊಂದಿಗೆ ತೆರವು ಕಾರ್ಯಾಚರಣೆ ನಡೆಸಿದರು.
ಜಕ್ರಿಬೆಟ್ಟುವಿನಲ್ಲಿ ಪುರಸಭೆಯ ಎರಡನೆ ಹಂತದ ಸಮಗ್ರ ಕುಡಿಯುವ ನೀರಿನ ಯೋಜನೆಯ ಪೈಪ್ಲೈನ್ ಕಾಮಗಾರಿ ಭರದಿಂದ ಸಾಗುತ್ತಿದ್ದು ಈಗಾಗಲೇ ಬೈಪಾಸ್ ತನಕ ಪೈಪ್ಲೈನ್ ಅಳವಡಿಸಲಾಗಿದ್ದು ಇದರ ಮುಂದಿನ ಭಾಗವಾಗಿ ಪೈಪ್ಲೈನ್ ಅಳವಡಿಕೆಗೆಗಾಗಿ ಜಂಕ್ಷನ್ ಬಳಿಯ ಅಂಗಡಿಗಳನ್ನು ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಮುಖ್ಯಾಧಿಕಾರಿ ತಿಳಿಸಿದ್ದಾರೆ.
ನಾಲ್ಕು ರಸ್ತೆಗಳ ಸಂಗಮ:
ಬಂಟ್ವಾಳ ಬೈಪಾಸ್ ಜಂಕ್ಷನ್ ನಾಲ್ಕು ರಸ್ತೆಗಳನ್ನು ಕೂಡುವ ಸಂಗಮವೂ ಆಗಿದೆ. ಒಂದು ರಸ್ತೆ ಮಂಗಳೂರು – ಧರ್ಮಸ್ಥಳ ಇನ್ನೊಂದು ರಸ್ತೆ ಬಂಟ್ವಾಳ – ಮೂಡಬಿದ್ರೆಗೆ ಸಂಚರಿಸುತ್ತದೆ. ಈ ರಸ್ತೆಯು ಅಗಲ ಕಿರಿದಾಗಿದ್ದು ಪ್ರತಿನಿತ್ಯವು ಟ್ರಾಫಿಕ್ ಜಾಮ್ ಉಂಟಾಗಿ ಸಂಚಾರಕ್ಕೆ ತೊಡಕಾಗುತ್ತಿದೆ. ಕಾಲೇಜ್ ರಸ್ತೆಗೆ ವಾಹನಗಳು ತಿರುವು ಪಡೆದುಕೊಳ್ಳುವ ವೇಳೆ ಎದುರಿನಿಂದಲೂ ವಾಹನಗಳು ಬಂದಾಗ ಟ್ರಾಫಿಕ್ ಜಾಮ್ ಉಂಟಾಗುತ್ತದೆ.
ಕೆಲ ದಿನಗಳ ಹಿಂದೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಜಿ. ಬೊರಸೆ ಅವರು ಸ್ಥಳ ಪರಿಶೀಲನೆ ನಡೆಸಿ ಬಸ್ ನಿಲುಗಡೆಗೆ ಪರ್ಯಾಯ ಕ್ರಮವನ್ನು ಕೈಗೊಳ್ಳುವಂತೆ ಟ್ರಾಫಿಕ್ ಎಸ್ಸೈಗೆ ಸೂಚಿಸಿದ್ದರು.
ಅದರಂತೆ ಟ್ರಾಫಿಕ್ ಎಸ್ಸೈ ಚಂದ್ರಶೇಖರಯ್ಯ ಅವರು ಅಂಗಡಿಗಳ ತೆರವುಗೊಳಿಸಿದ ಸ್ಥಳದಲ್ಲಿ ರಸ್ತೆಯನ್ನು ಅಗಲೀಕರಣಗೊಳಿಸಿ ಟ್ರಾಫಿಕ್ ಜಾಮ್ ಪರಿಹರಿಸುವ ನಿಟ್ಟಿನಲ್ಲಿ ಮುಂದಾಗಿದ್ದಾರೆ.
ರಿಕ್ಷಾ ನಿಲ್ದಾಣದ ಬಳಿ ಧರ್ಮಸ್ಥಳ ಕಡೆಗೆ ತೆರಳುವ ಬಸ್ಗಳ ನಿಲುಗಡೆಗೆ ಅವಕಾಶ ಕಲ್ಪಿಸಲು ನಿರ್ಧರಿಸಿದ್ದಾರೆ. ಹಾಗೆಯೇ ಮಂಗಳೂರಿನತ್ತ ಸಂಚರಿಸುವ ಬಸ್ಗಳಿಗೆ ಈಗಾಗಲೇ ಅಮ್ಟಾಡಿ ಗ್ರಾಪಂ ನಿರ್ಮಿಸಿರುವ ಬಸ್ ತಂಗುದಾನದಲ್ಲಿ ನಿಲುಗಡೆಗೊಳ್ಳಲಿದೆ.