ವಿಶೇಷ

ಬಿ.ಸಿ.ರೋಡ್ ಸರ್ಕಲ್ ಇನ್ನು ಬ್ರಹ್ಮಶ್ರೀ ನಾರಾಯಣ ವೃತ್ತ

ಬಂಟ್ವಾಳ : ರಾಷ್ಟ್ರೀಯ ಹೆದ್ದಾರಿ 75 ಹಾಗೂ 234ನ್ನು ಸಂಧಿಸುವ ಬಿ.ಸಿ.ರೋಡಿನ ಮುಖ್ಯ ವೃತ್ತಕ್ಕೆ ನಾಮಕರಣಗೊಳಿಸುವ ಕುರಿತಾದ ಗೊಂದಲಕ್ಕೆ ಕೊನೆಗೂ ತೆರೆ ಬಿದ್ದಿದೆ.

‘ಬ್ರಹ್ಮಶ್ರೀ ನಾರಾಯಣ ಗುರು ವೃತ್ತ’ ಎಂದು ಇದೀಗ ಅಧಿಕೃತಗೊಂಡಿದೆ. ಇಲ್ಲಿ ಈ ಹಿಂದೆ ನಿರ್ಮಿಸಲಾದ ವೃತ್ತವನ್ನು ಪುರ್ನರಚಿಸಿ ಅದರಲ್ಲಿ ಪೀಠವೊಂದನ್ನು ನಿರ್ಮಿಸಲಾಗಿದ್ದು, ‘ಒಂದೇ ಜಾತಿ ಒಂದೇ ಮತ ಒಂದೇ ದೇವರು ಹಾಗೂ ಬ್ರಹ್ಮಶ್ರೀ ನಾರಾಯಣ ಗುರು ವೃತ್ತ’ ಎಂದು ಉಲ್ಲೇಖಿಸಿರುವ ಪೀಠದ ಮಾದರಿಯನ್ನು ರಚಿಸಲಾಗಿದೆ.

ಹಲವು ವರ್ಷಗಳಿಂದ ಈ ವೃತ್ತ ಅವೈಜ್ಞಾನಿಕ ರೀತಿಯಲ್ಲಿದ್ದ ನಿರ್ದಿಷ್ಟವಾದ ಹೆಸರಿಲ್ಲದೆ ಬಿ.ಸಿ.ರೋಡು ಸರ್ಕಲ್ ಎಂದು ಕರೆಯಲಾಗುತ್ತಿತ್ತು. ಇದೀಗ ಈ ವೃತ್ತದ ಸುತ್ತ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾದಿಕಾರ ಇಲಾಖೆ ಅಗಲೀಕರಣಗೊಳಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದೆ.

ಈ ವೃತ್ತಕ್ಕೆ ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘ ಹಾಗೂ ಯುವವಾಹಿನಿ ಘಟಕವು ಜಗದ್ಗುರು ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರನ್ನು ನಾಮಕರಣಗೊಳಿಸುವಂತೆ ಪುರಸಭೆ, ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರಿಗೆ ಲಿಖಿತ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಈ ಪ್ರಸ್ತಾವನೆ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಚರ್ಚೆಯಾಗಿ ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರನ್ನು ನಾಮಕರಣಗೊಳಿಸಲು ನಿರ್ಣಯಕೈಗೊಂಡು ಜಿಲ್ಲಾಧಿಕಾರಿಗಳಿಗೆ ಶಿಫಾರಸು ಮಾಡಲಾಗಿತ್ತು.

ಸಾಧಕರ ಹೆಸರು ಚಲಾವಣೆಗೆ
ದಲಿತ ಸಂಘಟನೆಗಳು ಈ ವೃತ್ತಕ್ಕೆ ಸಂವಿದಾನ ಶಿಲ್ಪಿ ಬಾಬಾ ಸಾಹೇಬ್ ಡಾ. ಅಂಬೇಡ್ಕರ್ರವರ ಹೆಸರನ್ನು ನಾಮಕರಣಗೊಳಿಸಬೇಕೆಂದು ಈ ಹಿಂದೆಯೇ ಪ್ರಸ್ತಾವನೆ ಸಲ್ಲಿಸಿತ್ತು. ಹಾಗೆಯೇ ತಾಲೂಕು ಕುಲಾಲ ಸುಧಾರಕ ಸಂಘವು ಸ್ವಾತಂತ್ರ್ಯ ಹೋರಾಟಗಾರ ದಿ. ಅಮ್ಮೆಂಬಳ ಬಾಳಪ್ಪರವರ ಹೆಸರನ್ನು ಇಡಬೇಕೆಂಬ ಪ್ರಸ್ತಾವನೆಯನ್ನು ಸಲ್ಲಿಸಿತ್ತು. ಜೊತೆಗೆ ತಾಲೂಕಿನಲ್ಲಿಯೇ ಹುಟ್ಟಿ ಬೆಳೆದು ಸಾಧನೆಗೈದ ವೈಕುಂಠ ಬಾಳಿಗಾ, ಲೀಲಾವತಿ, ಪಂಜೆ ಮಂಗೇಶರಾಯರವರ ಹೆಸರನ್ನು ಇಡಬೇಕೆಂಬ ಬಗ್ಗೆಯೂ ಸಾರ್ವಜನಿಕ ವಲಯದಲ್ಲೂ ಚರ್ಚೆ ನಡೆದಿತ್ತು.

ಆದರೆ ಪುರಸಭೆ ಸಾಮಾನ್ಯ ಸಭೆಯಲ್ಲಿ ಬಿಲ್ಲವ ಸಮಾಜ ಸೇವಾ ಸಂಘ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಮಾತ್ರ ಮುಂದಿಟ್ಟು ಚರ್ಚಿಸಿ ವೃತ್ತಕ್ಕೆ ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರನ್ನು ಅನುಮೋದಿಸಿ ಜಿಲ್ಲಾದಿಕಾರಿಗಳಿಗೆ ಮುಂದಿನ ಪ್ರಕ್ರಿಯೆಗೆ ಕಳುಹಿಸಿಕೊಟ್ಟಿತು.

ಇದೀಗ ಹೆದ್ದಾರಿ ಇಲಾಖೆಯು ಕೂಡಾ ಈ ಹೆಸರಿಗೆ ಅಸ್ತು ಎಂದಿದೆ. ಈ ನಡುವೆ ದಲಿತ ಸಂಘಟನೆಯ ಮುಖಂಡರು ಎಸ್.ಸಿಎಸ್ಟಿಗಳ ಕುಂದುಕೊರತೆಯ ಸಭೆಗಳಲ್ಲಿಯೂ ಪ್ರಸ್ತಾಪಿಸಿ ಡಾ. ಬಾಬಾ ಸಾಹೇಬ್ರವರ ಹೆಸರನ್ನು ಚರ್ಚೆಗೂ ತೆಗೆದುಕೊಳ್ಳದ ಪುರಸಭೆಯ ನಿಲುವನ್ನು ಪ್ರಶ್ನಿಸಿದ್ದರಲ್ಲದೆ ತಾಲೂಕಿನ ಸಾಧಕರ ಹೆಸರನ್ನಾದರೂ ನಾಮಕರಣಗೊಳಿಸುವುದು ಸೂಕ್ತ ಎನ್ನುವ ವಾದವನ್ನು ಕೂಡ ಮಂಡಿಸಿದ್ದರು.

ಆದರೆ ಇದೀಗ ಬಿ.ಸಿ.ರೋಡು ಮುಖ್ಯವೃತ್ತಕ್ಕೆ ‘ಬ್ರಹ್ಮಶ್ರೀ ನಾರಾಯಣಗುರು ವೃತ್ತ’ ಎಂದೇ ಅಧಿಕೃತಗೊಂಡಿದೆ. ಇನ್ನು ಮುಂದಕ್ಕೆ ಬಿ.ಸಿ.ರೋಡು ವೃತ್ತ ‘ಬ್ರಹ್ಮಶ್ರೀ ನಾರಾಯಣಗುರು ವೃತ್ತ’ ಎಂದು ಕರೆಸಿಕೊಳ್ಳಲಿದೆ.

ವಿವೇಕಾನಂದ ವೃತ್ತ
ಕೆಲಸಮಯದ ಹಿಂದೆ ಬಿ.ಸಿ.ರೋಡಿನ ಈ ಮುಖ್ಯ ವೃತ್ತಕ್ಕೆ ಸ್ವಾಮಿ ವಿವೇಕಾನಂದ ವೃತ್ತ ಎಂದು ಹೆಸರನ್ನಿಟ್ಟು ನಾಮಫಲಕ ಕೂಡಾ ಅಳವಡಿಸಲಾಗಿತ್ತು. ಹೆದ್ದಾರಿ ಅಗಲೀಕರಣದ ಕಾಮಗಾರಿಯ ವೇಳೆ ಈ ಫಲಕ ಕಿತ್ತುಹೋಗಿತ್ತು. ಬಳಿಕ ಈ ಹೆಸರು ಕೂಡ ಮರೆತು ಹೋಯಿತು. ಈ ನಾಮಕರಣ ಪುರಸಭೆಯಲ್ಲೂ ಅಧಿಕೃತವಾಗಿ ಅಂಗೀಕಾರವಾಗಿರಲಿಲ್ಲ.

ರಾಷ್ಟ್ರೀಯ ಹೆದ್ದಾರಿ ಪ್ರಾದಿಕಾರ ಇಲಾಖೆಯ ಅನುಮತಿಯನ್ವಯ ಅವರೇ ಸೂಚಿಸಿರುವಂತೆ ವೃತ್ತ ಹಾಗೂ ಅದರಲ್ಲಿ ಪೀಠವನ್ನು ನಿರ್ಮಿಸಲಾಗಿದೆ. ಇದರಲ್ಲಿ ನಾರಾಯಣ ಗುರುಗಳ ಪ್ರತಿಮೆಯನ್ನು ಸ್ಥಾಪಿಸಲಾಗುತ್ತಿಲ್ಲ. ವೃತ್ತವನ್ನು ಮುಂದಿನ ದಿನಗಳಲ್ಲಿ ಇನ್ನಷ್ಟು ಸುಂದರಗೊಳಿಸಲಾಗುವುದು. ಇದರ ನಿರ್ವಹಣೆಯನ್ನು ಸಂಘವೇ ಮಾಡಲಿದೆ. ಎಂದು ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘ ಪ್ರಧಾನ ಕಾರ್ಯದರ್ಶಿ ಬೇಬಿ ಕುಂದರ್ ತಿಳಿಸಿದರು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts