ಬಂಟ್ವಾಳ: ತಾಲೂಕು ಎಲಿಯ ಮಾಗಣೆಗೊಳಪಟ್ಟ ಎಲಿಯನಡುಗೋಡು ಗ್ರಾಮದ ಕಾರಣಿಕ ಕ್ಷೇತ್ರವಾದ ಉಪ್ಪಿರ ಶ್ರೀ ಕೊಡಮಣಿತ್ತಾಯ ಮತ್ತು ಶ್ರೀ ಮುಜುಲ್ನಾಯ ದೈವಸ್ಥಾನದ ಜೀರ್ಣೋದ್ಧಾರ ಕಾರ್ಯ ಆರಂಭಗೊಂಡಿದ್ದು ಇದರ ವಿಜ್ಞಾಪನಾ ಪತ್ರ ಬಿಡುಗಡೆ ಕಾರ್ಯಕ್ರಮ ಪೂಂಜ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಯಿತು.
ರಾಜ್ಯ ಅರಣ್ಯ ಸಚಿವ ಬಿ.ರಮಾನಾಥ ರೈ ಅವರು ವಿಜ್ಞಾಪನಾ ಪತ್ರ ಬಿಡುಗಡೆಗೊಳಿಸಿ ಮಾತನಾಡಿ ದೈವ-ದೇವಸ್ಥಾನ ಮೊದಲಾದ ಆರಾಧನಾ ಕೇಂದ್ರಗಳಲ್ಲಿ ಗ್ರಾಮಸ್ಥರೆಲ್ಲರೂ ಒಗ್ಗಟ್ಟಾಗಿ ತೊಡಗಿಸಿಕೊಳ್ಳುವುದರಿಂದ ದೇವರ ಅನುಗ್ರಹದಿಂದ ಯಾವುದೇ ಕಾರ್ಯಕ್ರಮಗಳು ಯಶಸ್ವಿಯಾಗುತ್ತದೆ.ಇದರಿಂದ ಗ್ರಾಮದ ಅಭಿವೃದ್ಧಿಯಾಗಿ ಸಮೃದ್ಧಿಗೊಳ್ಳುತ್ತದೆ ಎಂದು ಹೇಳಿದರು.
ಬಂಟ್ವಾಳ ವಿಧಾನ ಸಭಾ ಕ್ಷೇತ್ರದಲ್ಲಿ ಹೆಚ್ಚು ದೈವ-ದೇವಸ್ಥಾನಗಳ ಜೀರ್ಣೋದ್ಧಾರ ಕಾರ್ಯಗಳಲ್ಲಿ ಶಾಸಕನಾಗಿ,ಸಚಿವನಾಗಿ ಭಾಗವಹಿಸುವ ಅವಕಾಶ ದೊರಕಿದೆ.ಇದು ಕ್ಷೇತ್ರದ ಜನತೆ ನನ್ನ ಮೇಲಿಟ್ಟ ಪ್ರೀತಿಯಾಗಿದೆ.ಈ ಎಲ್ಲಾ ಕಾರ್ಯಗಳಿಗೆ ಸಂಪೂರ್ಣ ಸಹಕಾರ ನೀಡುವುದರ ಜೊತೆಗೆ ಕಾರ್ಯಕ್ರಮಗಳು ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ ಎಂದು ಹೇಳಿದರು.
ಕ್ಷೇತ್ರ ಆಸ್ರಣ್ಣ ಕೃಷ್ಣ ಪ್ರಸಾದ್ ಆಚಾರ್ಯ ಅವರು ಮಾತನಾಡಿ ಪಂಚ ಗ್ರಾಮಗಳ ಮಾಗಣೆಗೊಳಪಟ್ಟ ಈ ಕ್ಷೇತ್ರ 150 ವರ್ಷಗಳ ಹಿಂದೆ ಹಿರಿಯರು ಆರಾಧಿಸಿಕೊಂಡು ಬಂದಿದ್ದು,ಪರ್ವ,ನರ್ತನ ಸೇವೆಗಳಿಂದ ಕಾರಣಿಕ ಕ್ಷೇತ್ರವೆಂದು ಮೆರೆಯುತ್ತಿತ್ತು.ಕಾಲಕ್ರಮೇಣ ನಿಂತು ಹೋಗಿತ್ತು.ಪೂಂಜ ದೇವಸ್ಥಾನದ ಬ್ರಹ್ಮಕಲಶ ಸಂದರ್ಭದಲ್ಲಿ ಸ್ಥಳ ಪ್ರಶ್ನೆಯಲ್ಲಿ ಕಂಡು ಬಂದ ಪ್ರಕಾರ ಜೀರ್ಣೋದ್ಧಾರದ ಸಂಕಲ್ಪ ಮಾಡಲಾಗಿದೆ.ಸುಮಾರು ಎಂಬತ್ತು ಲಕ್ಷ ರೂ.ವೆಚ್ಚವಿದೆ.ಇದಕ್ಕೆ ಗ್ರಾಮಸ್ಥರು ಸಹಕರಿಸಬೇಕಾಗಿದೆ ಎಂದರು.
ಆಡಳಿತ ಸಮಿತಿ ಅಧ್ಯಕ್ಷ ಮೂಡಬಿದಿರೆ ಚೌಟರ ಅರಮನೆ ಕುಲದೀಪ್,ಟ್ರಸ್ಟ್ ಅಧ್ಯಕ್ಷ ಪ್ರಕಾಶ್ಜೈನ್ ಜಂಕಳ,ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವಸಂತ ಶೆಟ್ಟಿ ಕೇದಗೆ, ಗುತ್ತಿನಮನೆಯ ವಸಂತ ಜೈನ್,ನಡ್ಯೋಡಿಗುತ್ತು ಧನಂಜಯ ಜೈನ್,ಸಂಗಬೆಟ್ಟು ಗುತ್ತು ಉದಯಕುಮಾರ್ ಜೈನ್,ಪೂಂಜ ದೇವಸ್ಥಾನದ ಅರ್ಚಕ ಪ್ರಕಾಶ್ ಭಟ್,ವಿವಿಧ ಸಮಿತಿಪದಾಧಿಕಾರಿಗಳು ಹಾಗೂ ಸದಸ್ಯರು ಮತ್ತು ಮಾಗಣೆ ಗ್ರಾಮಸ್ಥರು ಉಪಸ್ಥಿತರಿದ್ದರು.
ಕ್ಷೇತ್ರ ಆಸ್ರಣ್ಣ ಕೃಷ್ಣ ಪ್ರಸಾದ್ ಆಚಾರ್ಯ ಅವರು ಸ್ವಾಗತಿಸಿದರು. ಕಾನೂನು ಸಲಹೆಗಾರ,ನ್ಯಾಯವಾದಿ ಸುರೇಶ್ ಶೆಟ್ಟಿ ಸಿದ್ದಕಟ್ಟೆ ವಂದಿಸಿದರು.ಉಮೇಶ್ ಹಿಂಗಾಣಿ ಕಾರ್ಯಕ್ರಮ ನಿರೂಪಿಸಿದರು.