ಬಂಟ್ವಾಳ: ಸ್ವಿಫ್ಟ್ ಕಾರು ಬ್ರೇಕ್ ಹಾಕಿದ ಪರಿಣಾಮ ಹಿಂಬದಿಯಲ್ಲಿದ್ದ ಕಾರಿನಲ್ಲಿದ್ದ ಕಬ್ಬಿಣದ ಸರಳು ಕಾರಿನೊಳಗೆ ಹೊಕ್ಕ ಘಟನೆ ರಾಷ್ಟ್ರೀಯ ಹೆದ್ದಾರಿ 75ರ ಕಲ್ಲಡ್ಕ ಸಮೀಪ ಸೂರಿಕುಮೇರಿನ ದಾಸಕೋಡಿ ಎಂಬಲ್ಲಿ ಮಂಗಳವಾರ ನಡೆದಿದೆ.
ಸ್ವಿಫ್ಟ್ ಕಾರೊಂದು ಹಠಾತ್ತನೆ ಬ್ರೇಕ್ ಹಾಕಿದ ಪರಿಣಾಮ ಹಿಂದಿನಿಂದ ಕಬ್ಬಣದ ರಾಡ್ಗಳನ್ನು ಹೇರಿಕೊಂಡು ಬರುತ್ತಿದ್ದ ಓಮ್ನಿ ಕಾರಿನ ಚಾಲಕ ಕೂಡಾ ಬ್ರೇಕ್ ಹಾಕಿದ್ದ ವೇಳೆ ಕಾರಿನ ಮೇಲಿದ್ದ ಕಬ್ಬಿಣದ ರಾಡ್ಗಳು ಸ್ವಿಫ್ಟ್ ಕಾರಿನ ಹಿಂಬದಿಯಿಂದ ನುಗ್ಗಿ ಮುಂಬದಿಯಿಂದ ಹೊರ ಬಂತು.
ಈ ಘಟನೆಯಿಂದಾಗಿ ಸ್ವಿಫ್ಟ್ ಕಾರಿನಲ್ಲಿದ್ದ ಬೆಂಗಳೂರು ಮೂಲದ ದಂಪತಿ ಹಾಗೂ ಮಗು ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸ್ವಿಫ್ಟ್ ಕಾರು ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದು ದಾಸಕೋಡಿ ಎಂಬಲ್ಲಿ ಇದರ ಚಾಲಕ ಹೊಂಡ ತಪ್ಪಿಸುವ ಭರದಲ್ಲಿ ಒಮ್ಮೆಲೆ ಬ್ರೇಕ್ ಹಾಕಿದ್ದ ಎನ್ನಲಾಗಿದೆ.
ಈ ಸಂದರ್ಭದಲ್ಲಿ ಹಿಂದಿನಿಂದ ಕಬ್ಬಿಣದ ರಾಡ್ಗಳನ್ನು ಹೇರಿಕೊಂಡು ತೆರಳುತ್ತಿದ್ದ ಓಮ್ನಿ ಕಾರಿನ ಚಾಲಕ ಕೂಡಾ ಏಕಾಏಕಿ ಬ್ರೇಕ್ ಹಾಕಿದ್ದ. ಆಗ ಮೇಲಿದ್ದ ಕಬ್ಬಣದ ರಾಡ್ಗಳು ನೇರವಾಗಿ ಎದುರಿಗಿದ್ದ ಸ್ವಿಫ್ಟ್ ಕಾರಿನ ಹಿಂಭಾಗದ ಗಾಜಿನ ಮೂಲಕ ಒಳ ನುಗ್ಗಿ ಮುಂಭಾಗದ ಗಾಜಿನ ಮೂಲಕ ಹೊರಕ್ಕೆ ಬಂದಿದೆ.
ಸ್ವಿಫ್ಟ್ ಕಾರಿನಲ್ಲಿದ್ದ ದಂಪತಿ ಮುಂಭಾಗದ ಸೀಟ್ನಲ್ಲಿ ಕುಳಿತಿದ್ದರೆ ಮಗು ಹಿಂಬದಿಯ ಸೀಟ್ನಲ್ಲಿ ಕುಳಿತಿತ್ತು. ಕಾರಿನೊಳಗೆ ನುಗ್ಗಿದ ರಾಡ್ಗಳು ಅದೃಷ್ಟವಶಾತ್ ತಾಯಿ ಮತ್ತು ಮಗುವಿನ ತಲೆಯ ಮೇಲಿನಿಂದ ಕೂದಲೆಲೆಯ ಅಂತರದಲ್ಲಿ ಹಾದು ಹೋಗಿದೆ. ಇವರು ಗಾಯಗಳಿಲ್ಲದೆ ಅಪಾಯದಿಂದ ಪಾರಾಗಿದ್ದಾರೆ. ಘಟನೆಯಿಂದಾಗಿ ಕೆಲವೊತ್ತುಗಳ ಕಾಲ ಹೆದ್ದಾರಿಯಲ್ಲಿ ಸಂಚಾರ ಅಸ್ಥವ್ಯಸ್ತಗೊಂಡಿತು.
ಸುದ್ದಿ ತಿಳಿದ ವಿಟ್ಲ ಪೊಲೀಸರು ಸ್ಥಳಕ್ಕೆ ಆಗಮಿಸಿ ರಸ್ತೆ ಮಧ್ಯೆದಿಂದ ವಾಹನಗಳನ್ನು ಬದಿಗೆ ಸರಿಸಿ ಸುಗಮ ಸಂಚರಕ್ಕೆ ಅನುವು ಮಾಡಿಕೊಟ್ಟರು.