ನಮ್ಮೂರಲ್ಲೇನು ನಡೆಯುತ್ತದೆ ಎಂದು ತಿಳಿಯುವ ಕುತೂಹಲ ಎಲ್ಲರಿಗೂ ಇರುತ್ತದೆ. ಇಂದಿನ ಸಮಾಚಾರ ನಾಳೆ ವೃತ್ತಪತ್ರಿಕೆಗಳಲ್ಲಿ ಬರುವುದು ಇದ್ದೇ ಇದೆ. ಆದರೆ ಅದಕ್ಕೂ ಮುನ್ನ ತಾಲೂಕಿನಲ್ಲಿ ಘಟಿಸುವ ಪ್ರಮುಖ ವಿಚಾರ, ಸಭೆ, ಸಮಾರಂಭ, ಸಾಂಸ್ಕೃತಿಕ, ಸಾಮಾಜಿಕ ಚಟುವಟಿಕೆಗಳ ಮಾಹಿತಿಯನ್ನು ನಿಮ್ಮ ಮುಂದಿಡುವ ಉದ್ದೇಶ bantwalnews ಗಿದೆ. ಬಂಟ್ವಾಳ ತಾಲೂಕಿನ ದೈನಂದಿನ ಸುದ್ದಿ ನೀಡುವ ಮೊತ್ತಮೊದಲ ಜಾಲತಾಣವಾಗಿ ನಮ್ಮೂರ ವಿಚಾರಗಳನ್ನು ಜಗತ್ತಿಗೆ ತಿಳಿಸುವ ಕಾರ್ಯವನ್ನು www.bantwalnews.com ಮೂಲಕ 2016, ನವೆಂಬರ್ 10ರಂದು ಆರಂಭಿಸಲಾಗಿದೆ.
ಸಾಮಾನ್ಯವಾಗಿ ವೆಬ್ ಪತ್ರಿಕೆಗಳು ಘಟನೆ ನಡೆದ ತಕ್ಷಣ ಬ್ರೇಕಿಂಗ್ ನ್ಯೂಸ್ ಬಿತ್ತರಿಸುತ್ತದೆ. ಇದು ಅಪರಿಪೂರ್ಣವಾಗಿರುತ್ತದೆ ಎಂಬ ಧ್ವನಿಗಳನ್ನು ನಾವು ಗೌರವಿಸುತ್ತೇವೆ. ಹೀಗಾಗಿ ಬಂಟ್ವಾಳನ್ಯೂಸ್ ಬ್ರೇಕಿಂಗ್ ನ್ಯೂಸ್ ಗಾಗಿ ಆತುರಪಟ್ಟು ಸುದ್ದಿಯನ್ನು ಒದಗಿಸುವುದಿಲ್ಲ. ಸುದ್ದಿಯ ಖಚಿತತೆ ಲಭ್ಯವಾದ ಬಳಿಕವಷ್ಟೇ ಪ್ರಕಟಿಸಲಾಗುತ್ತದೆ. ಯಾವುದೇ ಆತುರ, ಸ್ಪರ್ಧೆಯೂ ನಮಗಿಲ್ಲ.
ಇದಕ್ಕೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ಗೂಗಲ್ ಪೇ ಮಾಡುವುದಿದ್ದರೆ, Gpay: 9448548127
ಜಗತ್ತಿನೆಲ್ಲೆಡೆ ಇರುವ ಬಂಟ್ವಾಳ ತಾಲೂಕಿನ ಬಾಂಧವರು ಒಂದೇ ಕ್ಲಿಕ್ ಮೂಲಕ ನಮ್ಮಲ್ಲೇನಾಗುತ್ತಿದೆ ಎಂದು ಅರಿತುಕೊಳ್ಳಲು ಸಹಾಯ ಮಾಡುವುದು, ಎಲ್ಲ ಜಾತಿ, ಮತ, ಪಂಥ ಹಾಗೂ ಜನಸಾಮಾನ್ಯರಿಗೂ ವೇದಿಕೆ ನೀಡಿ ಸಮಾನವಾಗಿ ಕೊಂಡೊಯ್ಯುವ ಸುದ್ದಿಯನ್ನಷ್ಟೇ ನೀಡುವುದು ಹಾಗೂ ಯಾವುದೇ ಪೂರ್ವಾಗ್ರಹವಿಲ್ಲದ ಮಾಹಿತಿ ಕೊಡುವುದು ಈ ಜಾಲತಾಣದ ಉದ್ದೇಶ. ಇದರ ಬೆಳವಣಿಗೆಗೆ ತಮ್ಮ ಬೆಂಬಲ ನಿರೀಕ್ಷಿಸುತ್ತಿದ್ದೇವೆ. ಮಾಹಿತಿ, ಸಲಹೆಗಳಿಗೆ ಸದಾ ಸ್ವಾಗತ.
www.bantwalnews.comನಲ್ಲಿ ಪ್ರಕಟಗೊಳ್ಳುವ ಜಾಹೀರಾತುಗಳ,ಲೇಖನಗಳ ವಿಚಾರಗಳಿಗೂ ವೆಬ್ ತಾಣಕ್ಕೂ ಸಂಬಂಧವಿಲ್ಲ. ಇದು ಓದುಗರ ಗಮನಕ್ಕೆ. ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ.
Note: All opinions regarding the article published in Bantwalnews and the related issues belonging to the respected articles are those of the author, and this has no relation to BantwalNews. Recommendations and suggestions provided here are left for the readers consideration.
ABOUT THE EDITOR
ಹರೀಶ ಮಾಂಬಾಡಿ
————————
ಕಳೆದ ೨೭ ವರ್ಷಗಳಿಂದ ರಾಜ್ಯದ ಪ್ರಮುಖ ದೈನಿಕ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಹಲವು ಜವಾಬ್ದಾರಿಯುತ ಪ್ರಮುಖ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ ಅನುಭವವಿರುವ ಹರೀಶ ಮಾಂಬಾಡಿ ಅವರು ಪ್ರಸ್ತುತ ಬಂಟ್ವಾಳದಲ್ಲಿ ವಾಸವಾಗಿದ್ದು, ಡಿಜಿಟಲ್ ಮತ್ತು ಮುದ್ರಣ ಮಾಧ್ಯಮಗಳಲ್ಲಿ ಸಕ್ರಿಯರಾಗಿದ್ದಾರೆ.
ಕನ್ನಡದ ಒಟ್ಟು ಐದು ಪ್ರಮುಖ ದೈನಿಕ, ಒಂದು ವಾರಪತ್ರಿಕೆ, ಎರಡು ಡಿಜಿಟಲ್ ಪತ್ರಿಕೆ ಯಲ್ಲಿ ವರದಿಗಾರ, ಉಪಸಂಪಾದಕ, ಹಿರಿಯ ಉಪಸಂಪಾದಕ, ಮುಖ್ಯ ಉಪಸಂಪಾದಕ ಹೀಗೆ ವಿವಿಧ ಸ್ತರದ ಹುದ್ದೆಗಳಲ್ಲಿ ಸುದೀರ್ಘ ವರ್ಷಗಳ ಕಾಲ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಬಂಟ್ವಾಳನ್ಯೂಸ್ ಎಂಬ ಡಿಜಿಟಲ್ ಪತ್ರಿಕೆಯನ್ನು ಹತ್ತು ವರ್ಷಗಳ ಹಿಂದೆ ಆರಂಭಿಸಿ ಯಶಸ್ವಿಯಾಗಿ ಮುನ್ನಡೆಸಿಕೊಂಡು ಬಂದಿರುವ ಅವರು, ಪಾಸಿಟಿವ್ ಸುದ್ದಿಗಳಿಗೆ ಆದ್ಯತೆ ನೀಡುವ ಮೂಲಕ ಬ್ರೇಕಿಂಗ್ ಸುದ್ದಿಗಳ ಬೆನ್ನು ಬೀಳದೆ, ರಚನಾತ್ಮಕ ವಿಚಾರಗಳಿಗೆ ಆದ್ಯತೆ ನೀಡಿದ್ದಾರೆ.
ಪತ್ರಿಕಾರಂಗದ ಪಯಣ:
೧೯೯೯ರಲ್ಲಿ ಹೊಸ ದಿಗಂತ ದಿನಪತ್ರಿಕೆಗೆ ಬಂಟ್ವಾಳ ಭಾಗದ ವರದಿಗಾರನಾಗಿ ಮಾಧ್ಯಮ ರಂಗದಲ್ಲಿ ತೊಡಗಿಸಿಕೊಂಡ ಅವರು, ವಿಜಯ ಕರ್ನಾಟಕ ಮತ್ತು ಕನ್ನಡಪ್ರಭ ಪತ್ರಿಕೆಗೂ ಕೆಲಕಾಲ ಆ ಸಂದರ್ಭ ಬಂಟ್ವಾಳಕ್ಕೆ ವರದಿಗಾರರಾಗಿದ್ದರು. ಬಳಿಕ ೨೦೦೧ರಲ್ಲಿ ಮಣಿಪಾಲದಲ್ಲಿ ಉದಯವಾಣಿ ಬಳಗಕ್ಕೆ ಉಪಸಂಪಾದಕ, ವರದಿಗಾರನಾಗಿ ನಿಯುಕ್ತಿಗೊಂಡರು. ಆ ಸಂದರ್ಭ, ಉದಯವಾಣಿ ಬಳಗದ ತರಂಗ ವಾರಪತ್ರಿಕೆಯಲ್ಲೂ ಕೆಲಸ ಮಾಡುವ ಅವಕಾಶ ದೊರೆಯಿತು. ಕೆಲಕಾಲ ಉಡುಪಿ ವರದಿಗಾರರಾಗಿಯೂ ಕರ್ತವ್ಯ ಸಲ್ಲಿಸಿದರು. ೨೦೦೫ ಡಿಸೆಂಬರ್ ತಿಂಗಳಲ್ಲಿ ಕನ್ನಡಪ್ರಭ ದಿನಪತ್ರಿಕೆಯ ಮಂಗಳೂರು ಆವೃತ್ತಿಯಲ್ಲಿ ಉಪಸಂಪಾದಕನಾಗಿ ನಿಯುಕ್ತಿಗೊಂಡು, ಹಿರಿಯ ಉಪಸಂಪಾದಕನಾಗಿ ಭಡ್ತಿ ಹೊಂದಿದರು. ೨೦೧೨ರಲ್ಲಿ ವಿಜಯವಾಣಿ ಪತ್ರಿಕೆ ಆರಂಭಗೊಂಡಾಗ ಮಂಗಳೂರು ಆವೃತ್ತಿಯಲ್ಲಿ ಹಿರಿಯ ಉಪಸಂಪಾದಕನಾಗಿ ನಿಯುಕ್ತಿಗೊಂಡು, ಮುಖ್ಯ ಉಪಸಂಪಾದಕನಾಗಿ ಭಡ್ತಿ ಹೊಂದಿದರು. ೨೦೧೬ರಲ್ಲಿ ಸ್ವಂತ ವೆಬ್ ಪತ್ರಿಕೆ ಬಂಟ್ವಾಳನ್ಯೂಸ್ ಆರಂಭಿಸಿದರು. ಇದೇ ಸಂದರ್ಭ ಬಂಟ್ವಾಳ ಭಾಗಕ್ಕೆ ವಿಜಯ ಕರ್ನಾಟಕ ದಿನಪತ್ರಿಕೆಯ ವರದಿಗಾರರಾಗಿ ನಿಯುಕ್ತಿಹೊಂದಿದ್ದು, ಇದರೊಂದಿಗೆ ಈಟೀವಿ ಭಾರತದ ಬಂಟ್ವಾಳ ಭಾಗದ ಸುದ್ದಿ ಸಂಗ್ರಾಹಕರಾಗಿ ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ೨೦೨೩-೨೪ರಲ್ಲಿ ಹಿಂದುಸ್ತಾನ್ ಟೈಮ್ಸ್ ಕನ್ನಡ ಡಿಜಿಟಲ್ ಆವೃತ್ತಿಯನ್ನು ಆರಂಭಿಸಿದ ಸಂದರ್ಭ ಸುಮಾರು ಎರಡೂವರೆ ವರ್ಷ ದಕ್ಷಿಣ ಕನ್ನಡ, ಉಡುಪಿ ಭಾಗದ ವರದಿಗಾರರಾಗಿ ಕರ್ತವ್ಯ ಸಲ್ಲಿಸಿದ್ದಾರೆ. ನಮ್ಮೂರು ಎಂಬ ಡಿಜಿಟಲ್ ಪತ್ರಿಕೆಯನ್ನೂ ಹೊರತಂದಿದ್ದಾರೆ.
ಮುದ್ರಣ ಮಾಧ್ಯಮದಲ್ಲಿದ್ದಾಗ ಸ್ಥಳೀಯ ಸುದ್ದಿಗಳ ನಿರ್ವಹಣೆ, ಪುರವಣಿ ನಿರ್ವಹಣೆ, ವಾರಪತ್ರಿಕೆಗಳ ವಿವಿಧ ವಿಭಾಗ ನಿರ್ವಹಣೆಯನ್ನು ಮಾಡಿದ ಅನುಭವವಿದ್ದು, ಈ ವೇಳೆ ನಾವೀನ್ಯದೊಂದಿಗೆ ಪತ್ರಿಕೆ ಹೊರಬರಲು ಶ್ರಮಿಸಿದ್ದಾರೆ.
ಶಿಕ್ಷಣ, ಮಾನವಾಸಕ್ತಿಯ ವಿಷಯ, ಸಾಮಾಜಿಕ ಸಮಸ್ಯೆಗಳು, ಪೌರಸಮಸ್ಯೆ, ರಾಜಕೀಯ, ಕೃಷಿ, ಸಿನಿಮಾ, ವ್ಯಕ್ತಿಪರಿಚಯಗಳ ಕುರಿತು ತಾವು ಕರ್ತವ್ಯ ನಿರ್ವಹಿಸಿದ ಪತ್ರಿಕೆಗಳಲ್ಲಿ ನೂರಾರು ವಿಶೇಷ ವರದಿ, ಲೇಖನಗಳು ಪ್ರಕಟವಾಗಿದೆ. ಹಲವು ವರದಿಗಳು ಪರಿಣಾಮ ಬೀರಿವೆ. ತಳಸಮುದಾಯದ ಸಮಸ್ಯೆಗಳು, ಅಡಕೆ ಬೆಳೆಗಾರರ ಕುರಿತು ಬರೆದ ಸರಣಿ ಲೇಖನಗಳನ್ನು ಅವರ ಹೆಸರಿನೊಂದಿಗೆ ಅಂತರ್ಜಾಲದಲ್ಲಿ ಹುಡುಕಿದರೆ ನೋಡಬಹುದು.
ವಿಚಾರಸಂಕಿರಣದಲ್ಲಿ ಪಾಲ್ಗೊಳ್ಳುವಿಕೆ:
೨೦೦೪ರಲ್ಲಿ ನವದೆಹಲಿಯಲ್ಲಿ ಕಾಮನ್ ವೆಲ್ತ್ ದೇಶಗಳಿಗಾಗಿ ಆಯೋಜಿಸಲಾದ ಅಭಿವೃದ್ಧಿಪರ ವರದಿಗಾರಿಕೆ ಅಂತಾರಾಷ್ಟ್ರೀಯ ವಿಚಾರಸಂಕಿರಣದಲ್ಲಿ ಪಾಲ್ಗೊಂಡು ಪ್ರಬಂಧ ಮಂಡಿಸುವ ಭಾರತದ ಕನ್ನಡ ಪತ್ರಿಕೆಯ ಪ್ರತಿನಿಧಿಯಾಗಿ ಅವಕಾಶ ಪಡೆದಿದ್ದು, ಈ ಸಂದರ್ಭ ಅಭಿವೃದ್ಧಿಪರ ವರದಿಗಾರಿಕೆಗೆ ಇರುವ ಸವಾಲುಗಳು, ಸಾಧ್ಯತೆಗಳ ಕುರಿತು ವಿಚಾರ ಮಂಡಿಸಿದ್ದಾರೆ.
ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಸದಸ್ಯನಾಗಿ ವಿವಿಧ ಸಂದರ್ಭ ತೊಡಗಿಸಿಕೊಂಡಿದ್ದು, ಒಂದು ಅವಧಿಗೆ ದ.ಕ.ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಹಾಗೂ ಬಂಟ್ವಾಳ ತಾಲೂಕು ಅಧ್ಯಕ್ಷನಾಗಿ ಕಾರ್ಯನಿರ್ವಹಣೆ ಮಾಡಿದ್ದಾರೆ.
ಸರಕಾರಿ ಶಾಲೆಗಳ ಅಭಿವೃದ್ಧಿ ಕುರಿತು ಕಾಳಜಿ ವಹಿಸುತ್ತಿರುವ ಅವರು, ಸ್ಥಳೀಯ ಸರಕಾರಿ ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಜೋಡುಮಾರ್ಗ ಜೇಸಿಯ ಸದಸ್ಯರಾಗಿ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.